10.2.2015 ರಂದು ಹಾವೇರಿ ಸಮೀಪ ಮಲಗುಂದ ಆಶ್ರಮದಲ್ಲಿ ಸಾಮೂಹಿಕ ಅಗ್ನಿಹೋತ್ರವು ನಡೆಯಲಿದೆ.ಆಸಕ್ತರು vedasudhe@gmail.comಸಂಪರ್ಕಿಸಿ
ನಿರಂತರ ಅಗ್ನಿಹೋತ್ರ ಮಂತ್ರ ಕೇಳಲು ಮೇಲೆ ಇರುವ "ಅಗ್ನಿಹೋತ್ರ ಸತ್ಸಂಗ" ಕೊಂಡಿಯನ್ನು ಕ್ಲಿಕ್ ಮಾಡಿ

Saturday, December 20, 2014

ವೇದಚಿಂತನೆ ಮತ್ತು ಸಾಮಾಜಿಕ ಸಾಮರಸ್ಯದ ಆಧ್ಯತೆ                 ಕಳೆದ ಆರೇಳು ವರ್ಷಗಳಿಂದ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಒಡನಾಟದಲ್ಲಿದ್ದೇನೆ.ಶರ್ಮರ ಸತ್ಯ ನುಡಿಗಳು ಹಲವರಿಗೆ ಸಹ್ಯವಾಗುವುದಿಲ್ಲ.ಶರ್ಮರು ಹೇಳುವುದೆಲ್ಲಾ ಸತ್ಯವೇ ಆದರೂ ಶರ್ಮರಿಗೆ ಕಟು ವಿರೋಧಿಗಳಿದ್ದಾರೆ.ಹಾಗೆಂದು ಅವರ ಶಿಷ್ಯರುಗಳಿಲ್ಲವೆಂದಲ್ಲ. ಸಾವಿರಾರು ಜನ ಅವರ ವಿಚಾರವನ್ನು ಇಷ್ಟಪಡುತ್ತಾರೆ ನನ್ನನ್ನೂ ಸೇರಿಸಿದಂತೆ.ಆದರೆ ಯಾವುದನ್ನು ಶರ್ಮರು ಖಂಡಿಸುತ್ತಾರೋ ಅದನ್ನೇ ಅವರ ಹಲವು ಶಿಷ್ಯರು ಮನೆಯಲ್ಲಿ ನಡೆಸಿಕೊಂಡು ಬರುವಂತಾ ಪರಿಸ್ಥಿತಿ! ಇದರಲ್ಲಿ ನಾನೇನೂ  ಹೊರತಲ್ಲ.ಅಂದರೆ ಕೇಳುವಾಗ ಹಿತವಾಗಿದ್ದು ಆಚರಿಸುವಾಗ ಹಿತವಾಗುವುದಿಲ್ಲ. ಉಧಾಹರಣೆಗೆ ಶ್ರಾದ್ಧಕರ್ಮಗಳನ್ನು ಮಾಡುವ ವಿಚಾರವನ್ನು ಶರ್ಮರು ಒಪ್ಪುವುದಿಲ್ಲ.  ಮೃತಶರೀರವನ್ನು ಸುಟ್ಟಮೇಲೆ ಎಲ್ಲಾ ಮುಗಿದಂತೆ.ಮುಂದೆ ಯಾವ ಶ್ರಾದ್ಧ ಕರ್ಮಗಳ ಅಗತ್ಯವಿಲ್ಲ. ಇದೆಲ್ಲಾ ಪುರೋಹಿತರ ಸೃಷ್ಟಿ ಎಂದೇ ಶರ್ಮರ ಅಭಿಮತ. ಆದರೆ ನೂರಾರು ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದಾರೆ.ಅದನ್ನು ಬಿಡುವುದು ಹೇಗೆ? ಈ ಅಡ್ದಕತ್ತರಿಯಲ್ಲಿ ಶರ್ಮರ ಶಿಷ್ಯರು ಸಿಕ್ಕಿಹಾಕಿಕೊಂಡು ನೆರಳುವವರೂ ಉಂಟು.    
         ನನ್ನಂತವನ ಚಿಂತನೆಯೇ ಬೇರೆ. ಶರ್ಮರನ್ನು ಒಪ್ಪುತ್ತೇನೆ.ಆದರೆ ಶ್ರಾದ್ಧಕರ್ಮಗಳನ್ನು ಬಿಡುವುದಿಲ್ಲ. ಅಂದರೆ ಇದೇನಿದು? ಹೇಳುವುದೊಂದು ಮಾಡುವುದೊಂದೇ? ಇಲ್ಲಾ. ಹೇಳುವುದನ್ನೇ ಮಾಡುತ್ತಿರುವುದು. ಅಪ್ಪ-ಅಮ್ಮನ ವಾರ್ಷಿಕ ಶ್ರಾದ್ಧಗಳನ್ನು ವರ್ಷಕ್ಕೊಮ್ಮೆ ಅಣ್ಣ ತಮ್ಮ ಅಕ್ಕ ತಂಗಿಯರು ಸೇರಲು ಒಂದು ಅವಕಾಶ ಮಾಡಿಕೊಂಡು ನಾಲ್ಕು ಜನರಿಗೆ ಊಟ ಹಾಕಿ ಅಪ್ಪ ಅಮ್ಮನ ಸ್ಮರಣೆಯಲ್ಲಿ ಅಂದು ಕಾಲ ಹಾಕೋದು. ನನಗೆ ನಿಜವಾಗಿ ಈ ಶ್ರಾದ್ಧಕರ್ಮಗಳಲ್ಲಿ ನಂಬಿಕೆ ಇಲ್ಲ. ಹಾಗಂತಾ ನನ್ನ ಅಣ್ಣ -ತಮ್ಮ,ಅಕ್ಕ-ತಂಗಿಯರಿಂದ ದೂರವಾಗಲೇ? ಅವರನ್ನು ಇದುವರೆವಿಗೆ ಕನ್ವಿನ್ಸ್ ಮಾಡಲು ನನ್ನಿಂದ ಸಾಧ್ಯವಾಗಿಲ್ಲ. ಹಾಗಾಗಿ ನಾನು ಶರ್ಮರನ್ನೂ ಬಿಡುವುದಿಲ್ಲ, ನನ್ನ ಕುಟುಂಬದವರನ್ನೂ ಬಿಡುವುದಿಲ್ಲ, ಇಂದಲ್ಲಾ ನಾಳೆ ಸತ್ಯ ಅರ್ಥವಾಗದೆ ಇರದು. ಆಗ ಶರ್ಮರ ಎಲ್ಲಾ ಸತ್ಯ ಚಿಂತನೆಯಂತೆಯೇ ನಡೆಯಬಹುದು. ಅದು ವರೆವಿಗೆ ಕಾಯುವ ತಾಳ್ಮೆಯನ್ನು ಕಲಿಸಿ ಕೊಟ್ಟಿರುವುದೂ ವೇದವೇ. 
      ವೇದೋಕ್ತವಾಗಿ ಮನೆಯಲ್ಲಿ ಎಲ್ಲವೂ ನಡೆದರೆ ನಿಜವಾಗಿ ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಾಗಿದ್ದು ಆಧ್ಯಾತ್ಮಿಕವಾಗಿ ಬೆಳೆಯಲು ಸಾಧ್ಯವಿದೆ. ಇದು ಎಲ್ಲರಿಗೂ ಅರ್ಥವಾಗುವುದಿಲ್ಲ. ಆದರೆ ಎಲ್ಲರಿಗೂ ಒತ್ತಾಯ ಮಾಡಿ ಮನಸ್ಸಿಗೆ ಬೇಸರ ಮಾಡುವ ಬದಲು ನಾನು ಆ ದಾರಿಯಲ್ಲಿದ್ದೇನೆ. ಆನಂದವಾಗಿದ್ದೇನೆ. ನೀವೂ ಬನ್ನಿ ಎಂದು ನಿತ್ಯವೂ ಹೇಳುತ್ತೇನೆ. ನನ್ನ ಪರಿಚಯವಿಲ್ಲದವರೆಲ್ಲಾ ವೇದಮಾರ್ಗದಲ್ಲಿ ಬರುತ್ತಾರೆ.ಆದರೆ ಕುಟುಂಬದವರು ಇನ್ನೂ ಮನಸ್ಸು ಮಾಡಿಲ್ಲ. ಆದರೆ ನಾನು ಮಾಡುವುದನ್ನು ಬಿಟ್ಟಿಲ್ಲ. ನಾನು ನಿತ್ಯವೂ ಪೂಜೆ ಪುನಸ್ಕಾರಗಳನ್ನೇನೂ ಮಾಡುವುದಿಲ್ಲ. [ ಪೂಜೆ ಪುನಸ್ಕಾರ ಮಾಡುವುದನ್ನು ಅಪರಾಧವೆಂದು ನಾನು ಹೇಳುವುದಿಲ್ಲ.ಅದಕ್ಕೆ ಪ್ರತ್ಯೇಕ ಚಿಂತನೆ ಮಾಡೋಣ] ಬೆಳಿಗ್ಗೆ ಧ್ಯಾನ. ಸಂಜೆ ಒಂದು ಗಂಟೆ ನಿಯಮಿತ ಸತ್ಸಂಗ. ಅದರಲ್ಲಿ ಮೊದಲು ಅರ್ಧ ಗಂಟೆ ಅಗ್ನಿಹೋತ್ರ. ಇನ್ನರ್ಧಗಂಟೆ ವೇದಮಂತ್ರಾಭ್ಯಾಸ. ಕೆಲವು ದಿನ ವೇದಮಂತ್ರಾಭ್ಯಾಸದ ಬದಲು ವೇದಚಿಂತನೆ. ಇದು ಕಳೆದ ಎರಡು ವರ್ಷಗಳ ನನ್ನ ನಿಯಮಿತ ದಿನಚರಿ. ಬೆಳಿಗ್ಗೆಯಿಂದ ಅದೆಷ್ಟೇ ಕೆಲಸಗಳ ಒತ್ತಡ ವಿರಲೀ ಸಂಜೆ ಒಂದು ಗಂಟೆಯಲ್ಲಿ ಮನಸ್ಸು ಶಾಂತವಾಗಿ ಬಿಡುತ್ತೆ.ಇದು ನನ್ನೊಬ್ಬನ ಅನುಭವವಲ್ಲ. ನಮ್ಮ ವೇದಭಾರತಿಯ ಸತ್ಸಂಗದಲ್ಲಿ ಪಾಲ್ಗೊಳ್ಳುವ ಎಲ್ಲರ ಅನುಭವವೂ ಇದೇ ಆಗಿದೆ.
               ವೇದದ ಆಧಾರದಲ್ಲಿ ಭಗವಂತನು ನಿರಾಕಾರಿ. ವಿಗ್ರಹಾರಾಧನೆ ಒಂದು ನಾಟಕವೆನ್ನುತ್ತಾರೆ ಶರ್ಮರು. ಆದರೆ ಒಬ್ಬ ಸಾಮಾಜಿಕ ಚಿಂತಕ ಯೋಚಿಸುವ ರೀತಿಯೇ ಬೇರೆ.ಅವನ ಮುಂದೆ ವಿಗ್ರಹಾರಾಧನೆ ಖಂಡನೆಗಿಂತಲೂ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಸುತ್ತಿರುವ ಬೇರೆ ವಿಚಾರಗಳು ಅವನ ಆಧ್ಯತೆಯಾಗಿರುತ್ತದೆ. ನಿಜವಾಗಿ ಅವನ ಕಣ್ಮುಂದೆ ಬರುವುದು ಸಾಮಾಜಿಕ ಸಾಮರಸ್ಯ. ವಿಗ್ರಹಾರಾಧನೆಯನ್ನು ಖಂಡಿಸುವುದಕ್ಕಿಂತ ಮನುಷ್ಯ-ಮನುಷ್ಯನಲ್ಲಿರುವ ತಾರತಮ್ಯಗಳನ್ನು ನಿವಾರಿಸುವ ಪ್ರಯತ್ನವು ಅವನ ಆಧ್ಯತೆಯಾಗಿರುತ್ತದೆ. ದೇವಾಲಯಗಳೇ ಅಪ್ರಸ್ತುತವಾದರೂ ದೇವಾಲಯಗಳಿಗೆ ಎಲ್ಲರಿಗೂ ಮುಕ್ತಪ್ರವೇಶವಿರಬೇಕೆಂಬುದು ಅವನ ಆಧ್ಯತೆಯ ವಿಷಯವಾಗುತ್ತದೆ. ಭಗವಂತನ ಸ್ವರೂಪವನ್ನು ಅರ್ಥ ಮಾಡಿಕೊಂಡರೆ ಮತ್ತು ಮನುಷ್ಯರೆಲ್ಲರೂ ಒಂದೇ ಎಂಬ ವೇದದ ವಿಚಾರವನ್ನು ಅರ್ಥಮಾಡಿಕೊಂಡರೆ, ಆಗ ದೇವರ ವಿಚಾರದಲ್ಲಿ, ಧರ್ಮದ ವಿಚಾರದಲ್ಲಿ, ಭಾಷೆಯ ಹೆಸರಲ್ಲಿ, ಪ್ರದೇಶದ ಹೆಸರಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಆಸ್ಪದವೇ ಇರುವುದಿಲ್ಲ-ಎಂಬುದು ಶರ್ಮರ ವಾದ. ಹೌದು, ಶರ್ಮರ ಮಾತು ನೂರಕ್ಕೆ ನೂರು ಸತ್ಯ.ಆದರೆ ಅಷ್ಟು ವಿಶಾಲ ಮನೋಭಾವ ಈಗ ಇಲ್ಲವಲ್ಲಾ!! ಅಷ್ಟು ದೂರ ನಡೆದುಬಂದಿದ್ದೀವಲ್ಲಾ!!
                 ಇಂತಾ ಸಮಯದಲ್ಲಿ ವೇದವನ್ನೂ ಬಿಡಬಾರದು, ನಮ್ಮ ಪೂರ್ವಜರು ನಡೆಸಿಕೊಂದು ಬಂದಿರುವ ಸಂಪ್ರದಾಯಗಳನ್ನೂ ಬಿಡಬಾರದು[ಅಸ್ಪೃಶ್ಯತಾ ಆಚರಣೆ ಸಂಪ್ರದಾಯ ವಿರೋಧಿ ಕೂಡ, ಇದು ಗೊತ್ತಿರಬೇಕು]             ಸಂಪ್ರದಾಯಗಳನ್ನು ವೇದಕ್ಕನುಗುಣವಾಗಿ ನಿಧಾನವಾಗಿ ಬದಲಿಸುತ್ತಾ ಬರುವುದೇ ಜಾಣ್ಮೆಯ ದಾರಿ. ಶರ್ಮರ ಪರಿಚಯ ವಾದ ಹಲವು ವರ್ಷಗಳು ಅವರೊಡನೆ ಚರ್ಚೆಯು ಜಗಳದಂತೆಯೇ ಆಗಿದೆ. ಆದರೂ ಅವರ ತಾಳ್ಮೆ ದೊಡ್ದದು.ಅವರು ತಾಳ್ಮೆಗೆಡುವುದಿಲ್ಲ. ಅವರ ಖಂಡನಾ ಸ್ವಭಾವವನ್ನು ನಾನು ಖಂಡಿಸಿದರೆ ಅವರು ಬೇಸರಗೊಳ್ಳುವುದಿಲ್ಲ, ಬದಲಿಗೆ ನಿಮ್ಮಗಳ ಒಡನಾಟದಲ್ಲಿ ನಾನು ಸ್ವಲ್ಪ ಮೆದುವಾಗಿದ್ದೇನೆ, ಎನ್ನುತ್ತಾರೆ.ಅವರ ಖಂಡನಾ ಸ್ವಭಾವದಿಂದಲೇ ಪುರೋಹಿತವರ್ಗವು ಅವರನ್ನು ಸಹಿಸಿಕೊಳ್ಳುವುದಿಲ್ಲ. ಅದು ಹೇಗೆ ಸಾಧ್ಯ? ಎಲ್ಲರನ್ನೂ ಮೆಚ್ಚಿಸಲು ಸಾಧ್ಯವೂ ಇಲ್ಲ.
             ಆದರೆ ನನಗೊಮ್ಮೊಮ್ಮೆ ಅನ್ನಿಸಿದ್ದುಂಟು " ಶರ್ಮರು ಪುರಾಣಗಳನ್ನು, ರೂಢಿಯಲ್ಲಿರುವ ಸಂಪ್ರದಾಯಗಳನ್ನು ಖಂಡಿಸದೇ ಹೋದರೆ ಅವರ ವಿಚಾರವನ್ನು ಕೇಳುವ ಜನರು ಹೆಚ್ಚುತ್ತಾರೆ. ಪುರಾಣವನ್ನೂ, ಸಂಪ್ರದಾಯಗಳನ್ನೂ ಖಂಡಿಸದೇ ವೇದದ ಶ್ರೇಷ್ಠತೆಯನ್ನು ಜನರಿಗೆ ತಲುಪಿಸುತ್ತಾ ಹೋದರೆ ನಿಧಾನವಾಗಿಯಾದರೂ ಜನರಿಗೆ ಅರ್ಥವಾಗುತ್ತದೆಂಬುದು ನನ್ನ ಅನಿಸಿಕೆ. ಅಸತ್ಯವನ್ನು ಕಂಡಾಗ ನನ್ನರಿವಿಗೆ ಬಾರದಂತೆ ಖಂಡನೆಯ ಮಾತುಗಳನ್ನು ನಾನೂ ಆಡಿರಬಹುದು.ಆದರೆ ಖಂಡನೆಗಿಂತಲೂ ವೇದದ ಶ್ರೇಷ್ಠತೆಯನ್ನು ಜನರಿಗೆ ತಲುಪಿಸುತ್ತಾ ಹೋಗುವುದೇ ಸರಿಯಾದ ದಾರಿ ಎನಿಸುತ್ತದೆ.

Thursday, December 18, 2014

ಹಾಸನದ ವೇದಭಾರತೀ ಕಾರ್ಯಕರ್ತರಿಂದ ಮಲಗುಂದ ಆಶ್ರಮ ಭೇಟಿ


ಆಶ್ರಮದ ಊರುಗೋಲಾದ ಶತಾಯುಶಿ ಮಾಮಾಜಿಯವರಜೊತೆ 


ಗುರುಕುಲದ ಮಹಾದ್ವಾರದಲ್ಲಿ ಹಾಸನದ ವೇದಭಾರತಿಯ ಕಾರ್ಯಕರ್ತರು
ಆಶ್ರಮದಲ್ಲಿ ಸ್ವಾಮೀಜಿಯರಿಂದ ಉಪನ್ಯಾಸ


ಈ ಮಗು ಊಟಕ್ಕೆ ಕುಳಿತಿಲ್ಲ.ಊಟ ಮುಗಿಸಿದ್ದಾನೆ.ತಟ್ಟೆ ನೋಡಿ ಸಾಮೂಹಿಕ ಅಗ್ನಿಹೋತ್ರದ ಬಗ್ಗೆ ಸಮಾಲೋಚನೆಯಲ್ಲಿ
ಓಡಿ ಬಂದು ನಮ್ ಫೋಟೋ ತೆಗೀರ್ರೀ ಎಂದ ಕಂದಗಳು

ಪ್ರಸಾದ ಭೋಜನಕ್ಕೆ ಅನ್ವರ್ಥ

Monday, December 15, 2014

ಒಂದು ಸಾವಿರ ಜನರಿಂದ ಸಾಮೂಹಿಕ ಅಗ್ನಿಹೋತ್ರ

ಸಾನ್ನಿಧ್ಯ : ಪೂಜ್ಯ ಸ್ವಾಮೀ ಚಿದ್ರೂಪಾನಂದ ಸರಸ್ವತೀ
 ಸ್ಥಳ :  ಆರ್ಷ ವಿದ್ಯಾನಿಕೇತನ , ಮಲಗುಂದ , ಹಾನಗಲ್ -ತಾ||, ಹಾವೇರಿ ಜಿಲ್ಲೆ.   ದಿನಾಂಕ : 10.02.2015  ಮಂಗಳವಾರ ಆಸಕ್ತರೆಲ್ಲರಿಗೂ  ಮುಕ್ತ ಅವಕಾಶ. 
 ಸಹಯೋಗ:  ವೇದಭಾರತೀ , ಹಾಸನ 
ವಿವರಗಳಿಗೆ vedasudhe@gmail.com   ಗೆ  ಮೇಲ್ ಮಾಡಿ. 

Saturday, December 13, 2014

Friday, December 12, 2014

ನಮ್ಮೊಳಗಿರುವ ದುಷ್ಟಗುಣಗಳನ್ನು ದೂರಮಾಡು


ಋಗ್ವೇದದ ಈ ಒಂದು ಮಂತ್ರದ ಬಗ್ಗೆ ವಿಚಾರಮಾಡೋಣ.

ಉಲೂಕಯಾತುಂ ಶುಶುಲೂಕಯಾತುಂ ಜಹಿ ಶ್ವಯಾತುಮುತ ಕೋಕಯಾತುಮ್|
ಸುಪರ್ಣಯಾತುಮುತ ಗೃಧ್ರಯಾತುಂ ದೃಷದೇವ ಪ್ರಮೃಣ ರಕ್ಷ ಇಂದ್ರ
[ಋಗ್ವೇದ ಮಂಡಲ ೭ ಸೂಕ್ತ ೧೦೪ ಮಂತ್ರ ೨೨]

ಪದಾರ್ಥ :

ಉಲೂಕಯಾತುಂ=ಗೂಬೆಯ ನಡೆಯೆಂಬ
ರಕ್ಷಃ = ಅವಗುಣ [ಮೋಹ]
ಶುಶುಲೂಕಯಾತುಂ= ತೋಳನನಡೆ
ರಕ್ಷಃ = ಅವಗುಣ [ಕ್ರೋಧ]
ಶ್ವಯಾತುಮ್=ನಾಯಿಯ ನಡೆ
ರಕ್ಷಃ = ಅವಗುಣ [ಲೋಭ]
ಉತ= ಮತ್ತು
ಕೋಕಯಾತುಮ್= ಜಕ್ಕವಕ್ಕಿಯನಡೆ 
ರಕ್ಷಃ = ಅವಗುಣ [ಕಾಮ]
ಜಹಿ = ಹೊಡೆದುಹಾಕು
ಸುಪರ್ಣಯಾತುಮ್= ಗರುಡಪಕ್ಷಿಯ ನಡೆ
ರಕ್ಷಃ = ಅವಗುಣ [ಮದ]
ಉತ= ಮತ್ತು
ಗೃಧ್ರಯಾತುಂ= ಹದ್ದಿನ ನಡೆ
ರಕ್ಷಃ = ಅವಗುಣ [ಮಾತ್ಸರ್ಯ]
ದೃಷದಾ ಇವ = ಕಲ್ಲಿನಂತಹ ಕಠೋರವಾದ ಸಾಧನದಿಂದ
ಪ್ರಮೃಣ = ಚೆನ್ನಾಗಿ ಹೊಸಕಿ ಹಾಕು

ಈ ವೇದ ಮಂತ್ರದಲ್ಲಿ ನಮ್ಮೊಳಗಿರುವ ದುಷ್ಟಗುಣಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದೆ. ಈ ದುಷ್ಟಗುಣಗಳನ್ನು ಒಂದೊಂದು ಪ್ರಾಣಿಯ ಅವಗುಣಕ್ಕೆ ಹೋಲಿಸಿ ಮನದಟ್ಟು ಮಾಡಲಾಗಿದೆ. ನಮ್ಮೊಳಗಡಗಿರುವ ಈ ದುಷ್ಟಪ್ರಾಣಿಗಳು ಯಾವುವೆಂದು ನೋಡೋಣ.
ಉಲೂಕಯಾತುಂ ಅಂದರೆಗೂಬೆಯ ನಡೆ. ನಮ್ಮೆಲ್ಲರೊಳಗೆ  ಗೂಬೆಗಳು ಸೇರಿಬಿಟ್ಟಿವೆ.ಗೂಬೆಗಳಿಗೆ ಬೆಳಕು ಕಂಡರೆ ಆಗುವುದಿಲ್ಲ. ಬೆಳಕು ಕಂಡೊಡನೆಯೇ ಓಡಿಹೋಗಿಬಿಡುತ್ತವೆ. ನಮ್ಮೊಳಗಿರುವ ಗೂಬೆಯಂತಹ ಗುಣಕ್ಕೂ ಹಾಗೆಯೇ. ಜ್ಞಾನವೆಂಬ ಬೆಳಕನ್ನು ಕಂಡರೆ ಆಗುವುದಿಲ್ಲ. ಜ್ಞಾನವೆಂಬ ಬೆಳಕನ್ನು ಕಂಡಕೂಡಲೇ ಓಡಿಹೋಗುವ ಸ್ವಭಾವವಿದೆಯಲ್ಲಾ ಇದು ಗೂಬೆಯ ಸ್ವಭಾವ. ಇದು ನಮ್ಮೊಳಗಿದೆ.ಈ ಗುಣವಿದ್ದಾಗ ಕತ್ತಲೆಯಲ್ಲಿ ಏನು ನಡೆದರೂ ನಮಗೆ ಗೊತ್ತಾಗುವುದೇ ಇಲ್ಲ. ಅಜ್ಞಾನವೆಂಬ ಅಂಧಕಾರವಿದ್ದಾಗ ನಮಗೆ ಸತ್ಯ ಯಾವುದು ಸುಳ್ಳು ಯಾವುದು ಗೊತ್ತಾಗುವುದೇ ಇಲ್ಲ. ಇದಕ್ಕೆ ಮೋಹವೆಂದೂ ಹೇಳಬಹುದು. ಮೋಹಕ್ಕೆ ಬಲಿಯಾದಾಗ ನಮಗೆ ಎಲ್ಲವೂ ಸರಿಯಾಗಿಯೇ ಕಾಣುತ್ತದೆ. ಈ ಮೋಹದ ಪರಿಣಾಮದಿಂದ  ನಮ್ಮ ಮನೆಯಲ್ಲಿ    ಏನು ತಪ್ಪುಗಳು ನಡೆದರೂ ನಮಗೆ ಗೊತ್ತಾಗುವುದೇ ಇಲ್ಲ. ಮೋಹದ ಪಾಶಕ್ಕೆ ನಾವು ಒಳಗಾಗಿರುತ್ತೇವೆ.
ನಮ್ಮೊಳಗಿರುವ ಎರಡನೆಯ ಪ್ರಾಣಿಸಹಜಗುಣವೆಂದರೆ ತೋಳನ ಗುಣ. ಶುಶುಲೂಕಯಾತುಂ ಅಂದರೆ ತೋಳನನಡೆ. ತೋಳನ ನಡೆಯು ಸಾಮಾನ್ಯವಾಗಿ ಯಾವಾಗಲೂ ಗುರ್ ಗುಟ್ಟುವ ಸ್ವಭಾವ. ಅದು ಕ್ರೋಧದ ಸಂಕೇತ.ಬೇಗ ತಾಳ್ಮೆಯನ್ನು ಕಳೆದುಕೊಳ್ಳುವ ಸ್ವಭಾವ. ಇಂತಹ ತೋಳನ ಸ್ವಭಾವ ನಮ್ಮೊಳಗಿದೆ. ಮುಖದ ಮೇಲೆ ತೋರ್ಗೊಡದಿದ್ದರೂ ಒಳಗೆ ತಾಳ್ಮೆಇಲ್ಲವಾದರೆ ತೋಳನ ಸ್ವಭಾದಲ್ಲಿ ಸಿಲುಕಿದ್ದೇವೆಂದೇ ಅರ್ಥ. ಬಾಯ್ಮಾತಿನಲ್ಲಿ ಒಳ್ಳೆಯ ಮಾತನಾಡುತ್ತಿದ್ದರೂ ಒಳಗೆ ಕ್ರೋಧ ತುಂಬಿರುತ್ತದೆ.

ಮುಂದಿನ ಗುಣ ನಾಯಿಯ ಗುಣ. ಶ್ವಯಾತುಮ್ ಅಂದರೆ ನಾಯಿಯ ನಡೆ. ಇದು ಮಾತ್ಸರ್ಯದ ಸಂಕೇತ. ನಾಯಿಯ ಮುಂದೆ ಯಾವುದೋ ಆಹಾರವಿದೆ ಎಂದಿಟ್ಟುಕೊಳ್ಳಿ. ಅದನ್ನು ತಾನೂ ತಿನ್ನುವುದಿಲ್ಲ, ಬೇರೆ ಯಾವ ಪ್ರಾಣಿಯೂ ಮುಟ್ಟಲೂ ಬಿಡುವುದಿಲ್ಲ. ಇಂತಹ ಸ್ವಭಾವಕ್ಕೆ ಮಾತ್ಸರ್ಯ ಅಥವಾ ಹೊಟ್ಟೆ ಉರಿ ಎನ್ನಬಹುದು. ಇಂತಹ ಸ್ವಭಾವ ನಮ್ಮೊಳಗಿಲ್ಲವೇ? [ಇದು ನಾಯಿಯ ಒಂದು ಸ್ವಭಾವ ಅಷ್ಟೆ.   ಆದರೆ ನಾಯಿಗೆ ಬೇರೆ ಉತ್ತಮ ಗುಣಗಳಿಲ್ಲವೆಂದು ಇದರ ಅರ್ಥವಲ್ಲ] ಆದರೆ ನಾಯಿಯ ಈ ದುಷ್ಟಸ್ವಾಭಾವವಿದೆಯಲ್ಲಾ, ಅದು ನಾಯಿಗಿಂತಲೂ ನಮ್ಮೊಳಗೇ ಜಾಸ್ತಿ ಇದೆ. ನಮ್ಮೆದುರು ಬೇರೆಯವರು ಚೆನ್ನಾಗಿ ಬದುಕಬಾರದು. ಅವರ ಬಗ್ಗೆ ನಮಗೆ ಮಾತ್ಸರ್ಯ. ನಮಗೆ ಅವರಂತೆ ಬದುಕಲು  ಸಾಧ್ಯವಾಗುವುದಿಲ್ಲ. ಬೇರೆಯವರು ಬದುಕುವುದನ್ನು ಸಹಿಸುವುದಿಲ್ಲ. ಈ ಕೆಟ್ಟ  ಸ್ವಭಾವ ನಮ್ಮಲ್ಲಿ ತುಂಬಿ ತುಳುಕುತ್ತಿಲ್ಲವೇ?
ಮುಂದಿನ ಸ್ವಭಾವ ಜಕ್ಕವಕ್ಕಿಯ ಸ್ವಭಾವ. ಕೋಕಯಾತುಮ್ ಅಂದರೆ  ಜಕ್ಕವಕ್ಕಿಯನಡೆ. ಈ ಪಕ್ಷಿ ಇಂದಿನ ಜನರಿಗೆ ಪರಿಚಯವಿಲ್ಲದಿರಬಹುದು.ನೈಟಿಂಗ್ ಗೇಲ್[ಬುಲ್‌ಬುಲ್‌ಹಕ್ಕಿ] ಪಕ್ಷಿಗೆ ಹೋಲಿಸಬಹುದು. ರಾತ್ರಿ ವೇಳೆಯಲ್ಲಿ ಹಾಡುವ ಹಕ್ಕಿ. ಇದು ಕಾಮದ ಸ್ವಭಾವ. ಸದಾ ಕಾಮದಲ್ಲಿ ತೊಡಗಿರುವ ಹಕ್ಕಿ. ಎಷ್ಟರ ಮಟ್ಟಿಗೆ  ಕಾಮದ ಚಟುವಟಿಕೆ ನಡೆಸುತ್ತದೆಂದರೆ ಅದು ಕಾಮದಲ್ಲಿ ತೊಡಗಿರುವಾಗಲೇ ಪ್ರಾಣವನ್ನು ಬಿಡುತ್ತದೆ. ಅಂದರೆ ಇಂದ್ರಿಯ ಭೋಗದ ಸಂಕೇತ ಈ ಕೋಕ ಪಕ್ಷಿ. ಸದಾಕಾಲವೂ ಅದು ಬೇಕು, ಇದು ಬೇಕು, ಭೋಗಿಸಬೇಕು ಎಂಬ ತವಕದ ಸಂಕೇತವೇ ಈ ಹಕ್ಕಿ. ಕಾಮನೆ ಎಂದರೆ ಗಂಡು ಹೆಣ್ಣಿನ ಕೂಡುವಿಕೆಯೇ ಆಗಬೇಕೆಂದೇನೂ ಅರ್ಥವಲ್ಲ. ಸದಾಕಾಲ ಬೇಕು ಬೇಕೆಂಬ ಬಯಕೆ. ನಮ್ಮ ಅಂತರಂಗಕ್ಕೆ ಪ್ರಶ್ನೆ  ಮಾಡಿಕೊಳ್ಳೋಣ. ನಮ್ಮಲ್ಲಿ ಈ ಮೃಗೀಯ ಗುಣ ಇಲ್ಲವೇ? 
ಮುಂದಿನ ಸ್ವಭಾವ ಗರುಡಪಕ್ಷಿಯ ನಡೆ. ಸುಪರ್ಣಯಾತುಮ್ ಅಂದರೆ ಗರುಡಪಕ್ಷಿಯ ನಡೆ. ಸಾಮಾನ್ಯವಾಗಿ ಎತ್ತರದಲ್ಲಿ ಹಾರುವ ಗರುಡಪಕ್ಷಿಯು ಕೆಳಗೆ ಬಂದು ಕುಳಿತುಕೊಳ್ಳುವಾಗಲೂ ಎತ್ತರದ ಜಾಗದಲ್ಲಿ ಕುಳಿತುಕೊಳ್ಳುತ್ತದೆ. ಇದು ಮದದ ಸಂಕೇತ. ಅಂದರೆ ನಾನು ಎಲ್ಲರಿಗಿಂತ ದೊಡ್ದವ, ನನ್ನ ಸಮಾನ ಯಾರಿದ್ದಾರೆಂಬ ಭಾವ. ಈ ಪ್ರಾಣಿಸಹಜಗುಣ ನಮ್ಮೊಳಗೆ ನಮ್ಮನ್ನು ನಾಶಮಾಡುತ್ತಿರುವ ಒಂದು ಅವಗುಣ.
ಮುಂದಿನದು ಗೃಧ್ರಯಾತುಂ ಅಂದರೆ ಹದ್ದಿನ ನಡೆ. ಹದ್ದು ಲೋಭದ ಸಂಕೇತ. ಅಂದರೆ ದುರಾಸೆಯ ಸಂಕೇತ. ಕಾಮಕ್ಕೂ ಲೋಭಕ್ಕೂ ಸ್ವಲ್ಪ ವೆತ್ಯಾಸವಿದೆ. ಕಾಮ ಎಂದರೆ ಬೇಕು, ಬೇಕು, ಬೇಕೆಂದು ಅನುಭವಿಸಿ ಬಿಡುವುದು, ಲೋಭವೆಂದರೆ ಬೇಕು, ಬೇಕು, ಬೇಕೆಂದು ಗಳಿಸಿ ಸಂಗ್ರಹ ಮಾಡಿಡುವುದು.ಲೋಭಿಯು ತಾನು ಅನುಭವಿಸುವುದಕ್ಕಿಂತ ಇಡುವುದೇ ಹೆಚ್ಚು.
ಹೀಗೆ ಅದೆಷ್ಟು ತರದ ಹದ್ದುಗಳು, ಅದೆಷ್ಟು ತರದ ತೋಳಗಳು, ನಾಯಿಗಳು,ಕೋಕಪಕ್ಷಿಗಳು, ಗರುಡಗಳು,ಗೂಬೆಗಳು ನಮ್ಮೊಳಗೆ ವಾಸಿಸುತ್ತಿರಬಹುದು? ಹೀಗಿರುವಾಗಲೂ  ನಮ್ಮ ಅಂತರಂಗವು ಪರಿಶುದ್ಧವಾಗಿರಬೇಕೆಂಬುದು ನಮ್ಮ ಆಸೆ.ಇಂತ ಪರಿಸ್ಥಿತಿಯಲ್ಲಿ ಆನಂದದ ಅನುಭವವು ಆಗಬೇಕೆಂದರೆ ಸಿಗುವ ಬಗೆಯಾದರೂ ಹೇಗೆ? ಹಾಗಾದರೆ ಇಂತಹಾ ಪರಿಸ್ಥಿಯಲ್ಲಿ ಆನಂದ ಸಿಗಬೇಕಾದರೆ ಏನು ಮಾಡಬೇಕು? ಈ ಮಂತ್ರದ ಕೊನೆಯ ಭಾಗದಲ್ಲಿ ಉತ್ತರವಿದೆ.

ದೃಷದೇವ ಪ್ರಮೃಣ ರಕ್ಷ ಇಂದ್ರ
ಇಲ್ಲಿ ಇಂದ್ರ ಎಂಬ ಪದವಿದೆ.ನಾವು ಈಗಾಗಲೇ ವಿಚಾರಮಾಡಿರುವಂತೆ ಇಂದ್ರ, ಅಗ್ನಿ, ಯಮ. . . . . . ಇತ್ಯಾದಿ ಏನೇ ಹೆಸರಿದ್ದರೂ ಅದು  ಸರ್ವಶಕ್ತ ಭಗವಂತನ ಹೆಸರೇ ಆಗಿದೆ. ಇಂದ್ರ ಪದವನ್ನು ಅರ್ಥಮಾಡಿಕೊಳ್ಳ  ಬೇಕಾದರೆ ಅದರ ಮೂಲ ಧಾತುವನ್ನು ಅರ್ಥಮಾಡಿಕೊಳ್ಳಬೇಕು. ಮೂಲ ಧಾತುವನ್ನು ಹುಡುಕಿದಾಗ..
ಇದಿ ಪರಮೈಶ್ವರ್ಯೇ ಎಂದು ತಿಳಿಯುತ್ತದೆ. ಅಂದರೆ ಪರಮ ಐಶ್ವರ್ಯಶಾಲಿಯಾದ ಭಗವಚ್ಛಕ್ತಿಯ ಹೆಸರು ಇಂದ್ರ. ಇಡೀ ಬ್ರಹ್ಮಾಂಡವು ಯಾರ ವಶದಲ್ಲಿದೆಯೋ ಅಂತಹ ವಿಶ್ವಚೇತನ ಭಗವಚ್ಛಕ್ತಿಯೇ ಇಂದ್ರ. ನಮ್ಮ ಅಂತರಂಗದಲ್ಲಿ  ಭಗವಂತನಲ್ಲಿ ನಾವು ಪ್ರಾರ್ಥಿಸುತ್ತಿದ್ದೇವೆ ಹೇ, ಇಂದ್ರ ಈ ದುಷ್ಟಪ್ರಾಣಿಗಳೆಲ್ಲಾ ನಮ್ಮೊಳಗೆ ಸೇರಿ ನಮಗೆ ಹಿಂಸೆ ಕೊಡುತ್ತಿವೆ.ಇವುಗಳಿಂದ ನಮ್ಮನ್ನು ರಕ್ಷಿಸು.
ರಕ್ಷಇಂದ್ರ ರಕ್ಷ ಎಂದರೆ ರಕ್ಷಿಸು ಎಂದು ಸಾಮಾನ್ಯವಾಗಿ ಅರ್ಥಮಾಡಿಕೊಳ್ಳುತ್ತೇವೆ. ಆದರೆ ಯಾವುದರಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕೋ ಆ ರಾಕ್ಷಸೀ ಶಕ್ತಿಗಳಿಗೆ ಹೆಸರು ರಕ್ಷ . ರಕ್ಷ ಪದದಿಂದಲೇ ರಾಕ್ಷಸ ಪದ ನಿರ್ಮಾಣವಾಗಿದೆ. ಯಾವುದರಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕೋ ಅಂತಹ ದುಷ್ಟಶಕ್ತಿಗಳಿಗೆ ರಾಕ್ಷಸೀ ಶಕ್ತಿಗಳೆಂದು ಹೆಸರು. ಇಂತಹ ದುಷ್ಟಶಕ್ತಿಗಳನ್ನು ನಮ್ಮಿಂದ ಹೇಗೆ ದೂರಮಾಡಬೇಕೆಂಬುದನ್ನು ಮಂತ್ರದ ಮುಂದಿನ ಭಾಗ ತಿಳಿಸುತ್ತದೆ. . . . . .
ದೃಷದೇವ ಪ್ರಮೃಣ ದೃಷದಾ ಇವ ಅಂದರೆ ಕಲ್ಲಿನಂತಹ ಕಠೋರವಾದ ಸಾಧನದಿಂದ, ಪ್ರಮೃಣ ಅಂದರೆ ಚೆನ್ನಾಗಿ ಹೊಸಕಿ ಹಾಕು. ಕಲ್ಲಿನಿಂದ ಅರೆಯುವಂತೆ ಅರೆದುಬಿಡು. ಕಲ್ಲಿನಿಂದ ಅರೆಯುವುದೆಂದರೇನು? ಕಲ್ಲಿನಿಂದ ಅರೆಯುವ ಮಾತಿನ ಹಿಂದಿನ ತೀವ್ರತೆಯನ್ನು ಗಮನಿಸಬೇಕು. ಈ ದುಷ್ಟ ಪ್ರಾಣಿಗಳು ನನ್ನೊಳಗೆ ಸೇರಿ ನನಗೆ ಕೊಡುತ್ತಿರುವ ಕಾಟವನ್ನು ನಾನು ತಡೆಯಲಾರೆ ಆದ್ದರಿಂದ ಕಲ್ಲಿನಿಂದ ಹೊಸಕಿಹಾಕಿಬಿಡು ಹೀಗೆ ನಮ್ಮ ಅಂತರ್ಯದಲ್ಲಿ ಇಂತಹ ಮೊರೆಯನ್ನು ಭಗವಂತನಲ್ಲಿ ಮಾಡಬೇಕು. 
ಈ ಮಂತ್ರವನ್ನು ಅರ್ಥಮಾಡಿಕೊಂಡಾಗ ಭಗವಂತನಿಗಾಗಿ ನಮ್ಮ ಅಂತರಂಗದಲ್ಲಿ  ಮೊರೆಇಡಬೇಕೇ ಹೊರತೂ ಬಾಹ್ಯಕ್ರಿಯೆಗಳಿಂದಲ್ಲ, ಎಂಬುದು ನಮಗೆ ಅರಿವಾಗುತ್ತದೆ. ಅಂದರೆ ನಮ್ಮ ಅಂತರರಂಗದ ಕೊಳೆಯನ್ನು ಪೂರ್ಣವಾಗಿ ತೆಗೆದುಹಾಕಲು ಭಗವಂತನಲ್ಲಿ ಮೊರೆಯಿಟ್ಟು ಅವನಲ್ಲಿ ಶರಣಾದಾಗ ನಮಗೆ ಆನಂದವನ್ನು ಪಡೆಯುವ ಹಾದಿ ಸುಗುಮವಾಗುತ್ತದೆ. ಅಂದರೆ ಅಂತರ್ಯದಲ್ಲಿರುವ ಕಾಮ,ಕ್ರೋಧ,ಲೋಭ, ಮೋಹ, ಮದ ,ಮತ್ಸರ್ಯಗಳನ್ನು ನಮ್ಮಿಂದ ಕಿತ್ತು ಹೊರಗೆ ಹಾಕುವ ತೀವ್ರವಾದ ಸಂಕಲ್ಪ ನಮ್ಮೊಳಗೆ ಮಾಡಿ, ಅದಕ್ಕೆ ತಕ್ಕಂತೆ ನಾವು ವ್ಯವಹರಿಸಿದರೆ ನಮ್ಮ ಅಂತರಂಗವು ಶುದ್ಧವಾಗುತ್ತದೆ ಆಗ ಆನಂದದ ಅನುಭವವು ನಮ್ಮ ಅಂತರಂಗದಲ್ಲಿಯೇ ಆಗುತ್ತದೆ. 
ಆದ್ದರಿಂದ ಆನಂದಕ್ಕಾಗಿ ಹೊರಗೆಲ್ಲೂ ಹುಡುಕಬೇಕಾಗಿಲ್ಲ. ನಮ್ಮ ಅಂತರಂಗವನ್ನು ಶುದ್ಧಮಾಡಿಕೊಂಡು ನಮ್ಮ ನಡೆ, ನುಡಿ, ವ್ಯವಹಾರದಲ್ಲಿ ಸತ್ಯ, ಅಹಿಂಸೆ, ಅಸ್ತೇಯ, ಅಪರಿಗ್ರಹ,ಬ್ರಹ್ಮಚರ್ಯ, ಶೌಚ,ಸಂತೋಷ, ತಪಸ್ಸು,ಸ್ವಾಧ್ಯಾಯ, ಈಶ್ವgಪ್ರಣೀಧಾನ, ಇವುಗಳನ್ನು ಬಲು ಶ್ರದ್ಧೆಯಿಂದ ಪಾಲನೆ ಮಾಡಿದ್ದೇ ಆದರೆ ಭಗವಂತನ ಸಾಕ್ಷಾತ್ಕಾರ ಸಾಧ್ಯ.

Wednesday, December 10, 2014

ನಾವೆಲ್ಲರೂ ಒಂದೇ. . . . ಜಾತಿ ಒಂದೇ. . . . .ಕುಲ ಒಂದೇ. . . . ನಾವ್ ಮನುಜರು

ನಮ್ಮ ಹಿಂದು ಸಮಾಜವನ್ನು ಕಾಡುತ್ತಿರುವ ಬಹುದೊಡ್ದ ಸಮಸ್ಯೆ ಎಂದರೆ ಸ್ಪೃಶ್ಯ-ಅಸ್ಪೃಶ್ಯ ಸಮಸ್ಯೆ , ಮೇಲು ಕೀಳೆಂಬ ಭಾವನೆ. ಜಾತಿ-ಜಾತಿಗಳ ನಡುವೆ ದ್ವೇಷ. ಈ ಎಲ್ಲಾ ಸಮಸ್ಯೆಗಳ ಮೂಲ ಎಲ್ಲಿದೆ? ಇವೆಲ್ಲಾ ನಾವು ಮಾಡಿಕೊಂಡಿರುವುದೇ? ಅಥವಾ ನಾವು ಪರಮ ಪ್ರಮಾಣವೆಂದು ನಂಬುವ ವೇದದಲ್ಲಿ ಇದೆಯೇ? ಈ ಬಗ್ಗೆ ವಿಚಾರ ಮಾಡೋಣ.
 ಶಾಸ್ತ್ರಾದ್ರೂಢಿರ್ಬಲೀಯಸಿ ಎಂಬ ಒಂದು ಮಾತಿದೆ. ಅಂದರೆ ಶಾಸ್ತ್ರಕ್ಕಿಂತ ರೂಢಿಯೇ ಬಲಶಾಲಿನಿ. ವೇದದಲ್ಲಿ ಹೇಳಿದ ವರ್ಣ ವ್ಯವಸ್ಥೆಯ ರೂಪವು ಕೆಟ್ಟು ಹಿಂದು  ಸಮಾಜದಲ್ಲಿ ಆತ್ಮಾಪಮಾನಕಾರವಾದ ಆಚರಣೆಗಳು ರೂಢಿಗೆ ಬಂದು ಇಂದು ಹಿಂದು ಸಮಾಜಕ್ಕೆ ಅದು ದೊಡ್ಡ   ಸಮಸ್ಯೆಯಾಗಿ ದೇಶದ ಅಭಿವೃದ್ಧಿಗೆ ಮತ್ತು ಸಮಜದ ಸಾಮರಸ್ಯಕ್ಕೆ ದೊಡ್ಡ ಅಡಚಣೆಯಾಗಿದೆ. ವೇದಗಳು ಸಾರ್ವಭೌಮ,ಸಾರ್ವಕಾಲಿಕ ಮತ್ತು ಸರ್ವಮಾನವ ಸಮಾನತೆಯ ವಿಚಾರಗಳನ್ನೇ ಪ್ರತಿಪಾದಿಸುವ ಅಮೂಲ್ಯ ನಿಧಿ. ವೇದಗಳು ಪ್ರತಿಪಾದಿಸುವ ಮಾನವ ಸಮಾನತೆಯನ್ನು  ಕೆಲವು ಮಂತ್ರಗಳ ಆಧಾರದಿಂದ ವಿಚಾರಮಾಡೋಣ.

ಅಯಂ ನಾಭಾ ವದತಿ ವಲ್ಗು ವೋ ಗೃಹೇ | ವೇದಪುತ್ರಾ ಋಷಯಸ್ತಚ್ಛೃಣೋತನ ||
ಸುಬ್ರಹ್ಮಣ್ಯಮಂಗಿರಸೋ ವೋ ಅಸ್ತು | ಪ್ರತಿಗೃಬ್ಣೀತ ಮಾನವಂ ಸುಮೇಧಸಃ ||
[ಋಗ್ವೇದ ೧೦ನೇ ಮಂಡಲ, ೬೨ ನೇ ಸೂಕ್ತ, ೪ ನೇ ಮಂತ್ರ]

ಅರ್ಥ  :
ದೇವಪುತ್ರಾಃ = ಭಗವಂತನ ಮಕ್ಕಳೇ
ಋಷಯಃ = ಋಷಿಗಳೇ,ದಾರ್ಶನಿಕರೇ
ಸುಮೇಧಸಃ = ಉತ್ತಮ ಬುದ್ಧಿಸಂಪನ್ನರೇ
ಅಂಗಿರಸಃ = ಆತ್ಮನಲ್ಲಿ ರಮಿಸುವವರೇ
ಅಯಂ ನಾಭಾ = ಈ ಪ್ರಭುವು, ಭಗವಂತನು
ವಃ ಗೃಹೇ = ನಿಮ್ಮ ಗೃಹಗಳಲ್ಲಿ [ನಿಮ್ಮ ಆತ್ಮನಲ್ಲಿ]
ವಲ್ಗು ವದತಿ = ಒಳ್ಳೆಯದನ್ನು ಪ್ರೇರೇಪಿಸುತ್ತಿದ್ದಾನೆ
ತತ್ ಶೃಣೋತನ = ಆ ಅಂತಃಪ್ರೇರಣೆಯನ್ನು ಆಲಿಸಿರಿ
ವಃ ಬ್ರಹ್ಮಣ್ಯಂ = ನಿಮ್ಮ ವೇದ ಜ್ಞಾನವು
ಸು ಅಸ್ತು = ಕಲ್ಯಾಣಕಾರಿಯಾಗಲಿ
ಮಾನವಂ = ಮಾನವನನ್ನು ಅಥವಾ ಮಾನವೀಯ ಜ್ಞಾನವನ್ನು
ಪ್ರತಿ ಗೃಭ್ಣೀತ = ಗ್ರಹಿಸಿರಿ
ಭಾವಾರ್ಥ  :
ಭಗವಂತನ ಮಕ್ಕಳೇ, ಋಷಿಗಳೇ,ದಾರ್ಶನಿಕರೇ, ಉತ್ತಮ ಬುದ್ಧಿಸಂಪನ್ನರೇ, ಆತ್ಮನಲ್ಲಿ ರಮಿಸುವವರೇ, ಭಗವಂತನು ನಿಮ್ಮ ಆತ್ಮನಲ್ಲಿ ಒಳ್ಳೆಯದನ್ನು ಪ್ರೇರೇಪಿಸುತ್ತಿದ್ದಾನೆ,  ಆ ಅಂತಃಪ್ರೇರಣೆಯನ್ನು ಆಲಿಸಿರಿ , ನಿಮ್ಮ ವೇದಜ್ಞಾನವು ಕಲ್ಯಾಣಕಾರಿಯಾಗಲಿ, ಮಾನವನನ್ನು ಅಥವಾ ಮಾನವೀಯ ಜ್ಞಾನವನ್ನು  ಗ್ರಹಿಸಿರಿ.
 ಎಂತಹ ಅದ್ಭುತವಾದ ಮಾತುಗಳು! ಮಾನವರೆಲ್ಲರನ್ನೂ ದೇವಪುತ್ರರೇ ಎಂದು ಸಂಬೋಧಿಸುವ ವೇದವು ಎಲ್ಲಾ ಜನರಲ್ಲಿ ಅವನ ಅಂತಃಪ್ರಜ್ಞೆಯನ್ನು ಬಡಿದೇಳಿಸಬೇಕಲ್ಲವೇ?ನೂತನ ಚೈತನ್ಯವನ್ನು ತುಂಬಬೇಕಲ್ಲವೇ? ಇಲ್ಲಿ ಮೇಲು-ಕೀಳಿನ ಪ್ರಶ್ನೆಗೆ ಅವಕಾಶವಿದೆಯೇ? ನಿಮ್ಮ ವೇದಜ್ಞಾನದಿಂದ ಮಾನವೀಯತೆಯನ್ನು ಗ್ರಹಿಸಿರಿ, ಎಂದು ವೇದವು ಸಾರುತ್ತಿದೆ.
ಯಜುರ್ವೇದದ ಇನ್ನೊಂದು ಮಂತ್ರವನ್ನು ನೋಡಿ. . . . . .

ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ 
ಆ ಯೇ ಧಾಮಾನಿ ದಿವ್ಯಾನಿ ತಸ್ಥುಃ || [ಯಜುರ್ವೇದ ಅಧ್ಯಾಯ -೧೧ , ಮಂತ್ರ-೫]

ಯೇ = ಯಾರು
ದಿವ್ಯಾನಿ ಧಾಮಾನಿ ತಸ್ಥುಃ = ದೇವದೇವನಿಂದ ನಿರ್ಮಿತವಾದ ನೆಲೆಗಳಲ್ಲಿ ಸ್ಥಿತರಾಗಿದ್ದಾರೋ
ವಿಶ್ವೇ ಅಮೃತಸ್ಯ ಪುತ್ರಾಃ =  ಆ ಸಮಸ್ತ ಅಮರಪ್ರಭುವಿನ ಪುತ್ರರು, ಅಮೃತಪುತ್ರರು
ಶೃಣ್ವಂತು = ಆಲಿಸಲಿ

 ಋಗ್ವೇದದ ಮಂತ್ರದಲ್ಲಿ ದೇವಪುತ್ರರೇ! ಎಂದು ಮಾನವರೆಲ್ಲರನ್ನೂ ಸಂಬೋಧಿಸಿದರೆ ಯಜುರ್ವೇದದ ಈ ಮಂತ್ರದಲ್ಲಿ ಅಮೃತಪುತ್ರರೇ!! ಎಂದು ಕರೆಯುತ್ತಿದೆ.
ಈ ವೇದ ಮಂತ್ರಗಳಲ್ಲಿನ ದೇವಪುತ್ರರೇ! ಅಮೃತಪುತ್ರರೇ!!  ಎಂಬ ಈ ಎರಡು ಶಬ್ಧಗಳನ್ನು ಕೇಳಿದಾಗ ನಮ್ಮ ಮೈ ನವಿರೇಳಬಾರದೇ? ವೇದವು ಮಾನವರನ್ನೆಲ್ಲಾ ಇಷ್ಟು ಶ್ರೇಷ್ಠಪದಗಳಿಂದ ಸಂಬೋಧಿಸುತ್ತಿರುವಾಗ ಎಲ್ಲಿ  ಮತ್ತು ಯಾವಾಗ ಮೇಲು-ಕೀಳೆಂಬುದು ಭೇದವು ನಮ್ಮ ಸಮಾಜದಲ್ಲಿ  ನುಸುಳಿತು?
ವೇದದಲ್ಲಿ  ಮಾನವರೆಲ್ಲರೂ ಒಂದೇ ಎಂಬುದಕ್ಕೆ ಸಾಕಷ್ಟು ಮಂತ್ರಗಳಿದ್ದರೂ ಈ ಎರಡು ಶಬ್ಧಗಳು ನಮ್ಮ ಆತ್ಮನಿರೀಕ್ಷಣೆಗೆ ಅವಕಾಶಮಾಡಬಾರದೇ? ಭಗವಂತನು ನಿಮ್ಮ ಆತ್ಮದಲ್ಲಿ ಒಳ್ಳೆಯ ವಿಚಾರಗಳನ್ನೇ ನೆಲೆಗೊಳಿಸಿದ್ದಾನೆ.ಮಾನವರೆಲ್ಲರೂ ಒಂದು ಎಂಬುದನ್ನು ವೇದವು ಸಾರಿ ಸಾರಿ ಹೇಳುತ್ತಿದೆ. ನಿಮ್ಮ ಆತ್ಮನ ಕರೆಗೆ ಓಗೊಡಿ, ನಿಮ್ಮ  ವೇದದ ಜ್ಞಾನದಿಂದ  ಮಾನವೀಯತೆಯನ್ನು ಗ್ರಹಿಸಿರಿ
ಬಹುಷಃ ಅಂದಿನ ಋಷಿಗಳಿಗೆ ಮಾನವೀಯತೆಯ ಬಗ್ಗೆ ಅತ್ಯಂತ ಕಾಳಜಿ. ಮಾನವ ಸಮಾಜವು ಎಂದೆಂದಿಗೂ  ಸಾಮರಸ್ಯದಿಂದ ಇರಬೇಕೆಂಬ ಅಪೇಕ್ಷೆ. ಆದ್ದರಿಂದಲೇ ಇರಬೇಕು ಅವರು ಕಣ್ಮುಚ್ಚಿ ತಪಸ್ಸಿಗೆ ಕುಳಿತರೆ ಅವರ ಮುಂದೆ ಧುತ್ತೆಂದು ಮಾನವ ಸಮಾಜವು ಮೂಡುತ್ತಿದ್ದಿರಬೇಕು. ಆದ್ದರಿಂದಲೇ ಮಾನವೀಯತೆಯ ಬಗ್ಗೆ ಹಲವು ಮಂತ್ರಗಳಲ್ಲಿ ಒತ್ತು ಕೊಟ್ಟಿದ್ದಾರೆ.

ಮಾನರಲ್ಲಿ ಸಮರಸತೆಯನ್ನು ಸಾರುವ ಋಗ್ವೇದದ ಮತ್ತೊಂದು ಮಂತ್ರದ ಬಗ್ಗೆ ವಿಚಾರ ಮಾಡೋಣ.

ದ್ಯೌರ್ವಃ ಪಿತಾ ಪೃಥಿವೀ ಮಾತಾ ಸೋಮೋ ಭ್ರಾತಾದಿತಿಃ ಸ್ವಸಾ |
ಅದೃಷ್ಟಾ ವಿಶ್ವದೃಷ್ಟಾಸ್ತಿಷ್ಠತೇಲಯತಾ ಸು ಕಮ್ ||
[ಋಗ್ವೇದ ೧ನೇ ಮಂಡಲ, ೧೯೧ ನೇ ಸೂಕ್ತ, ೬ ನೇ ಮಂತ್ರ]
ಅರ್ಥ :
ದ್ಯೌಃ = ಜ್ಯೋತಿರ್ಮಯ ಪರಮಾತ್ಮನು
ವಃ ಪಿತಾ =ನಿಮ್ಮೆಲ್ಲರ ತಂದೆ
ಪೃಥಿವೀ = ಭೂಮಿಯು
ಮಾತಾ =ತಾಯಿ
ಸೋಮಃ = ವಿವೇಕವು
ಭ್ರಾತಾ = ನಿಮ್ಮನ್ನು ಉದ್ಧರಿಸುವ ಸೋದರ
ಅದಿತಿಃ = ಅಖಂಡತ್ವ ಅಥವಾ ಪ್ರಾಮಾಣಿಕತೆಯು
ಸ್ವಸಾ = ಸ್ವತಃ ಬಾಳಿಗೆ ಸರಿದು ಬರುವ ಸೋದರಿ
ಅದೃಷ್ಟಾ = ಕಣ್ಣಿಗೆ ಕಾಣಿಸದಿರುವ
ಚ = ಮತ್ತು
ವಿಶ್ವದೃಷ್ಟಾಃ = ಕಾಣಿಸುತ್ತಿರುವ ಸರ್ವರೂ
ಸು ತಿಷ್ಠತ = ಒಳ್ಳೆಯ ರೀತಿಯಲ್ಲಿ ಬಾಳಿರಿ
ಕಂ  ಇಲಯತ = ಸುಖದಿಂದ ಉಪಭೋಗಿಸಿರಿ
ಭಾವಾರ್ಥ  :
ಜ್ಯೋತಿರ್ಮಯ ಪರಮಾತ್ಮನು ನಿಮ್ಮೆಲ್ಲರ ತಂದೆ, ಭೂಮಿಯು ನಿಮ್ಮ  ತಾಯಿ, ವಿವೇಕವು  ನಿಮ್ಮನ್ನು ಉದ್ಧರಿಸುವ ಸೋದರ,  ಅಖಂಡತ್ವ ಅಥವಾ ಪ್ರಾಮಾಣಿಕತೆಯು ಸ್ವತಃ ಬಾಳಿಗೆ ಸರಿದು ಬರುವ ಸೋದರಿ,  ಕಣ್ಣಿಗೆ ಕಾಣಿಸದಿರುವ ಮತ್ತು ಕಾಣಿಸುತ್ತಿರುವ ಸರ್ವರೂ  ಒಳ್ಳೆಯ ರೀತಿಯಲ್ಲಿ ಬಾಳಿರಿ, ಸುಖದಿಂದ ಉಪಭೋಗಿಸಿರಿ.
ವೈದಿಕ ಧರ್ಮದಲ್ಲಿ ಏಕರಸವಾಗಿ ಪ್ರವಹಿಸುವ ದಿವ್ಯ ಭಾವನೆ ಎಂದರೆ ಇದೇ ಆಗಿದೆ. ಜ್ಯೋತಿಸ್ವರೂಪನಾದ  ಆ ಪರಮಾತ್ಮನೇ ನಮ್ಮೆಲ್ಲರ ತಂದೆ. ಭೂಮಿಯೇ  ನಮ್ಮ ತಾಯಿ. ನಮ್ಮ ವಿವೇಕವೇ ನಮ್ಮನ್ನು ಉದ್ಧರಿಸುವ ಸೋದರ, ನಮ್ಮ ಪ್ರಾಮಾಣಿಕತೆಯೇ ನಮ್ಮ ಸೋದರಿ. ಎಲ್ಲರೂ ಸುಖವಾಗಿ ಬಾಳಿರೆಂಬುದು ವೇದದ ಕರೆ.ಇನ್ನೆಲ್ಲಿ ಬಂತು ಉಚ್ಚ-ನೀಚ ಭೇದ? ಸಂಸ್ಕೃತ ಶಬ್ದಕೋಶದಲ್ಲಿ ವೇದಮಂತ್ರಗಳ ಆಳವಾದ ಅರ್ಥ ತಿಳಿಯುವುದು ಕಷ್ಟ. ಈ ಮಂತ್ರದ ಹಲವು ಪದಗಳಿಗೆ ಸಂಸ್ಕೃತ ಶಬ್ದಕೋಶದಲ್ಲಿ ಬೇರೆಯೇ ಅರ್ಥ ಇದೆ. ಆದರೆ ದಯಾನಂದ ಸರಸ್ವತಿಯವರ ವೇದಭಾಷ್ಯ ದ ಆಧಾರದಲ್ಲಿ ವೇದಮಂತ್ರವನ್ನು ಅರ್ಥಮಾಡಿಕೊಂಡಾಗ ಅದರ ವಿಶಾಲತೆ ಅರ್ಥವಾಗುತ್ತದೆ.